Sandalwood Stars in Election

Sandalwood Stars in Election

ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಅರ್ಧ ಡಜನ್‌ಗೂ ಹೆಚ್ಚಿನ ಸಿನಿಮಾ ಕಲಾವಿದರು, ನಿರ್ಮಾಪಕರು ವಿಧಾನಸಭೆ ಚುನಾವಣೆ ಕಣಕ್ಕಿಳಿಯುತ್ತಿರುವುದು ವಿಶೇಷ ಗಮನಸೆಳೆದಿದೆ.

ಚುನಾವಣೆ ಪ್ರಚಾರಕಷ್ಟೇ ಬರುತ್ತಿದ್ದ ನಟ-ನಟಿಯರು ಈಗ ತಾವೇ ಸ್ಪರ್ಧೆಗಿಳಿಯಲು ತಯಾರಿ ನಡೆಸಿದ್ದಾರೆ. ಕೆಲವರು ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರೆ, ಮತ್ತೆ ಕೆಲವರಿಗೆ ಟಿಕೆಟ್‌ ಸಿಗುವುದು ಖಚಿತವಾಗಿದ್ದು, ಪ್ರಚಾರದ ತಯಾರಿಯಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ಕ್ಷೇತ್ರ ಆಯ್ಕೆಯಲ್ಲಿ ಮುಳುಗಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿ(ಎಸ್‌)ನಿಂದ ಟಿಕೆಟ್‌ ಬಯಸಿರುವ ಚಿತ್ರರಂಗದ ಗಣ್ಯರ ದೊಡ್ಟ ಪಟ್ಟಿಯೇ ಬೆಳೆಯುತ್ತಿದೆ. ಬಿಜೆಪಿಯಿಂದ ಪ್ರಮುಖವಾಗಿ ನಟ ಜಗ್ಗೇಶ್‌, ನಟಿ ಮಾಳವಿಕಾ ಅವಿನಾಶ್‌, ನಟ ಗಣೇಶ್‌ ಪತ್ನಿ ಶಿಲ್ಪಾ, ಲಹರಿ ರೆಕಾರ್ಡಿಂಗ್‌ ಕಂಪನಿ ಮಾಲೀಕ ಲಹರಿ ವೇಲು, ಕಾಂಗ್ರೆಸ್‌ನಿಂದ ನಟ ಕಮ್‌ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಜೆಡಿಎಸ್‌ನಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಕಿಚ್ಚ ಸುದೀಪ್‌ ಹೆಸರುಗಳು ಕೇಳಿ ಬರುತ್ತಿವೆ.

ಯಶವಂತಪುರದಿಂದ ಜಗ್ಗೇಶ್‌:

ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದ ನಟ ಜಗ್ಗೇಶ್‌ ಅವರನ್ನು ಯಶವಂತಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಆಲೋಚಿಸಿದೆ. ಜಗ್ಗೇಶ್‌ ಅವರು ಕೂಡ ಸಿಟಿಯಲ್ಲೇ ಕ್ಷೇತ್ರ ಸಿಕ್ಕಿದ ಖುಷಿಯಲ್ಲೇ ಇದ್ದಾರೆ. ಈ ಹಿಂದೆ ಜಗ್ಗೇಶ್‌ ಕಾಂಗ್ರೆಸ್‌ನಿಂದ ತುರುವೇಕೆರೆಯಲ್ಲಿ ಗೆದ್ದು ಕೊನೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ನಂತರ ತುರುವೇಕೆರೆ ಕಡೆ ತಲೆ ಹಾಕಿರಲಿಲ್ಲ. ಈಗ ಅವರು ಯಶವಂತಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಯಾರು ಎಲ್ಲಿಂದ ಕಣಕ್ಕೆ ?:

ರಾಕ್‌ಲೈನ್‌ ವೆಂಕಟೇಶ್‌ ಮಲ್ಲೇಶ್ವರಂನಿಂದ, ಸಾ.ರಾ. ಗೋವಿಂದು ರಾಜಾಜಿನಗರದಿಂದ, ಲಹರಿ ವೇಲು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಾಗಿದ್ದಾರೆ. ಇನ್ನು, ಬಿಜೆಪಿಯಲ್ಲಿ ಸಕ್ರಿಯವಾಗಿರುವ ನಟಿ ಮಾಳವಿಕಾ ಅವಿನಾಶ್‌ ರಾಜರಾಜೇಶ್ವರಿನಗರ ಅಥವಾ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ನಟ ಗಣೇಶ್‌ ಪತ್ನಿ ಶಿಲ್ಪಾ ಗಣೇಶ್‌ ಕೂಡ ರಾಜರಾಜೇಶ್ವರಿನಗರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಮಲ್ಲೇಶ್ವರದಲ್ಲಿ ನಿವೃತ್ತ ಪೊಲೀಸ್‌ ಅಕಾರಿ ಶಿವರಾಂ ಕೂಡ ಆಕಾಂಕ್ಷಿಯಾಗಿದ್ದಾರೆ. ಇವರ ಜತೆಗೆ ಇದೇ ಕ್ಷೇತ್ರದಿಂದ ಸಚಿವ ಎಂ.ಆರ್‌.ಸೀತಾರಾಮ್‌ ಅವರು ತಮ್ಮ ಪುತ್ರನಿಗೆ ಟಿಕೆಟ್‌ ಕೊಡಿಸುವ ಪ್ರಯತ್ನದಲ್ಲಿ ಇದ್ದಾರೆ. ಹೀಗಾಗಿ ರಾಕ್‌ಲೈನ್‌ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಲಹರಿ ವೇಲು ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮಾಜಿ ಕಾರ್ಪೋರೇಟರ್‌ ಬಿ.ವಿ.ಗಣೇಶ್‌ ಅವರು ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿದ್ದಾರೆ. ಈಗ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬುದನ್ನು ಕಾದುನೋಡಬೇಕು.

ಸ್ಪರ್ಧೆಗೆ ಸುದೀಪ್‌ ಒಲವು

ನಟ ಕಿಚ್ಚ ಸುದೀಪ್‌ ಕೂಡ ಜೆಡಿಎಸ್‌ನಿಂದ ಸ್ಪರ್ಸುವ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕ್ಷೇತ್ರ ಇನ್ನೂ ಗ್ಯಾರಂಟಿಯಾಗಿಲ್ಲ ಎನ್ನುತ್ತಾರೆ ಪಕ್ಷದ ಮುಖಂಡರೊಬ್ಬರು. ಜೆಡಿಎಸ್‌ ವರಿಷ್ಠ ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಸುತ್ತಾರೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಮತ್ತೊಂದು ಕಡೆ ಕಾಂಗ್ರೆಸ್‌ ಟಿಕೆಟ್‌ನಿಂದ ಕಣಕ್ಕಿಳಿಯಬಹುದು ಎಂಬ ಮಾತೂ ಕೇಳಿ ಬಂದಿದೆ.

ಜೆಡಿಎಸ್‌ನಿಂದ ಹಾಸ್ಯ ನಟರಾದ ರಂಗಾಯಣ ರಘು ಹಾಗೂ ಬುಲೆಟ್‌ ಪ್ರಕಾಶ್‌ ಹೆಸರು ಈ ಹಿಂದೆ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕೇಳಿ ಬಂದಿದ್ದವು. ಆದರೆ, ಕಳೆದ ಬಾರಿ ಸೋತ ವೀರಭದ್ರಯ್ಯ ಅವರಿಗೆ ಪಕ್ಷದ ವರಿಷ್ಠರು ಟಿಕೆಟ್‌ ಖಚಿತಪಡಿಸಿದ್ದರಿಂದ ಈ ಇಬ್ಬರು ಸ್ಪರ್ಧೆಯಿಂದ ಹಿಂದೆ ಸರಿಯುವಂತಾಗಿದೆ. ಆದರೆ, ಜೆಡಿಎಸ್‌ನ ಪರ ಇವರು ಪ್ರಚಾರ ಕೈಗೊಳ್ಳುವ ಸಾಧ್ಯತೆಯಿದೆ.

ಹೊಸ ಪಕ್ಷ ಕಟ್ಟಿ ಸಂಚಲನ ಮೂಡಿಸಿದ್ದ ನಟ ಉಪೇಂದ್ರ ನಡೆ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಇನ್ನು, ಪ್ರಚಾರಕ್ಕಾಗಿ ಕಾಂಗ್ರೆಸ್‌ ಪರ ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳುವ ಸಂಭವವಿದೆ. ಆದರೆ, ಆಂಧ್ರಕ್ಕೆ ವಿಶೇಷ ಸ್ಥಾನಮಾನ ವಿಚಾರದಲ್ಲಿ ಎನ್‌ಡಿಎ ವಿರುದ್ಧ ಮುನಿಸಿಕೊಂಡಿರುವ ಚಿರಂಜೀವಿ ಸಹೋದರ ಪವನ್‌ ಕಲ್ಯಾಣ್‌ ಬಿಜೆಪಿ ಪರ ಪ್ರಚಾರ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಬಾರಿ ಚುನಾವಣೆ ತಾರೆಯರ ಸ್ಪರ್ಧೆಯಿಂದ ಎಲ್ಲರ ಗಮನಸೆಳೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Source: Vijayakarnataka

LEAVE A REPLY

Please enter your comment!
Please enter your name here